ಕಾರುಣ್ಯವಾರಿಧಿ ಹರಿಯ ಕಾರುಣ್ಯ ಪಡೆದವಗೆ


ಇಳೆಯೊಳಗೆ ಅವತರಿಸಿ ಯತಿಯಾಶ್ರಮ ಪಡೆದು

ಬಲುಧನ್ಯ ಮಾನ್ಯ ನೀನಾದೆ ಗುರುವೇ |

ಹಲಧರಾನುಜ ಕೃಷ್ಣ ನರಸಿಂಹನುಪಾಸಕನೇ

ಒಲವಿನಿಂದಲಿ ಕೊನೆಗೆ ನೆಲೆಸಿದೆಯೋ ಮಾನವಿಯಲಿ||


ಗುಪ್ತವಾಗಿರುತ ನೀ ಗುಪ್ತಸಾಧನ ನಡೆಸಿ

ಆಪ್ತನಾದೆಯೋ ಹರಿಗೆ ಶ್ರೇಷ್ಠಸಾಧಕನೇ |

ತೃಪ್ತಿಯಲಿ ಪಾಮರರ ಪೋಷಿಪೆಯೋ ನೀ ತಂದೆ

ಸಕ್ತವಾಗಲಿ ಮನಸು ನಿನ್ನಲ್ಲಿ ಎನಗೆ ||

ಭಕ್ತಿ ಸುಜ್ಞಾನವೈರಾಗ್ಯದ ನಿಧಿ ನಿನ್ನ

ಯುಕ್ತಿಯಿಂದಲಿ ಭಜಿಪ ಮಾರ್ಗವರಿಯೇ ।

ಶಕ್ತಿ ಭಕ್ತಿಯ ನೀಡೋ ಮನದಲ್ಲಿ ನೀನೆಲಸಿ

ಮತ್ತೆ ಬೇಡುವೆ ಪಂಢರಿನಾಥವಿಠಲ ದಾಸಾ ||