ಭೋಗಭಾಗ್ಯವನು ತ್ಯಾಗ ಮಾಡಿ ವಿ-

ರಾಗಿಯಾದ ಮಹಾ ಯೋಗಿವರರ ಪದ ||


ಪಂಢರಿದಯದಿಂದ ಅಂದು ಬಂಡಿಲಿ ಜನಿಸುತಲಿ

ದಂಡನಾಯಕರಾಗಿ ಮೆರೆದು ಕಡೆಗೆ ಕೋ -

ದಂಡಧರನ ಪಾದ ಕಂಡರು ಹರುಷದಿ ||


ರಾಘವನಾಜ್ಞೆಯಲಿ ರಘುವೀರತೀರ್ಥರಡಿಗೆ ಬಾಗಿ

ಸಾಗರಶಯನನ ಯೋಗದಿ ಒಲಿಸಿ

ಜಗನ್ನಾಥದಾಸರ ಪ್ರಿಯರೆನಿಸಿದವರು ||


ಸಾರಿ ಭಜಿಪ ಜನರ ದುರಿತವ ದೂರ ಮಾಡಿ ಪೊರೆವ

ಭೂರಮಣನ ಪಾದಪಾರಾಯಣರಾದ

ನಾರಾಯಣತೀರ್ಥರೆಂಬಾಪಾರ ಮಹಿಮರ ||


ದರುಶನ ಭಾಗ್ಯವನು ಮಿಗೆ ಪರಿವಾರಕೆ ನೀಡುತಲಿ

ಕರುಣವ ತೋರುತ ಧರಣಿಯೊಳಗೆ

ವರ ಕರ್ಣರೆಂದಿಪರ ಚರಣ ಯುಗ್ಮವ ||


ಜಾಣರಂಗನ ಪದವ ತನುಮನಧನದಿಂದರ್ಚಿಸುತ

ಕ್ಷೋಣಿಬುಧರಿಗೆ ಮೃಷ್ಟಾನ್ನನೀಡಿ ಮಹಾ-

ದಾನಿ ಎನಿಸಿದಂಥ ಮಾನವಿನಿಲಯರ ||


IIಅಸ್ಮದ್ಗುರ್ವ೦ತರ್ಗತಭಾರತೀರಮಣಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು||