ರಾಮಚಂದ್ರರಾ ಪತ್ನಿ ಪ್ರೇಮದಿ ಜಾನಕಿ

ಈ ಮುನೀಂದ್ರನು ಗರ್ಭಧಾಮದಲ್ಲಿರೆ|

ಶ್ರೀಮಹೇಶಕ್ಷೇತ್ರದಿಂದ ಗ್ರಾಮ ಕಳಲೆಗೆ

ಭಾಮೆ ಬಂಡೆಯಲ್ಲಿ ಬರೆ ಈ ಮಹಿಮ ಪುಟ್ಟಿದ ||


ಉಸಿರಿಗೆ ಕಷ್ಟ ಈ ಶಿಶುವು ಪಡುತಿರೆ

ವ್ಯಸನ ಪಟ್ಟಳು ಕಂಬಳಿ ವಸನದಿಟ್ಟಳು |

ಕಸವಿಸೀಯಿಂದ ತಾ ಮನೆಗೆ ಬಂದಳು

ಶಶಿಯ ಮುಖದ ಶಿಶುವ ನೋಡಿ ಹಿಗ್ಗಿ ಪೋದಳು ||


ತಮ್ಮ ಕುಲಕೆ ತಿಲಕನೆಂದು ತಿಮ್ಮಗರ್ಪಿಸಿ

ಮೊಮ್ಮಗನ್ನ ಎತ್ತಿ ಅವ್ವ ಮುದ್ದನಿಟ್ಟಳು |

ರಮ್ಯ ನಾಮ ಶ್ರೀನಿವಾಸನೆಂದು ಕರೆದರು

ತನ್ಮನಾನಂದದಿಂದ ಲೀಲೆ ನೋಡ್ದರು ||


ಇದ್ದು ಮೈಸೂರಿನಲ್ಲಿ ವಿದ್ಯೆ ಕಲಿತರು

ಬುದ್ಧಿಜೀವಿ ಎನಿಸಿ ಪ್ರಸಿದ್ಧರಾದರು |

ಶುದ್ಧ ವಟುವೆನಿಸಿ ತಾವು ನಿಷ್ಠರಾದರು

ಮುದ್ದು ದ್ವಾರಕೀಯೊಡನೆ ಲಗ್ನವಾದರು ||


ರಕ್ಷಣಶಾಖೆ ಉದ್ಯೋಗ ದಕ್ಷರಾದರು

ಪಕ್ಷಿಧ್ವಜನ ದಯಕೆ ಕೆಲಸ ತಕ್ಷಣ ಬಿಟ್ಟರು |

ಅಕ್ಷಯಾಂಬರನ ಕೃಪೆಗೆ ದೀಕ್ಷರಾದರು

ಅಕ್ಷಯ ಫಲದ ದಾನವೆಲ್ಲ ದ್ವಿಜರಿಗಿತ್ತರು||


ಭಾಗ್ಯವೆಲ್ಲ ತ್ಯಜಿಸಿ ವೈರಾಗ್ಯ ತಾಳ್ದರು

ಶ್ರೀಗುರು ರಘುವೀರರಿಂದ ಯೋಗಿಯಾದರು |

ಸಾಗಿ ನಿತ್ಯ ಯಾತ್ರೆಯಿಂದ ಯೋಗವರಿತರು

ಬೇಗ ಮರುತ ಶಾಸ್ತ್ರವರಿತು ಪಠನ ಗೈದರು


ಮಾನವೀಯ ಭಕ್ತಸುರಧೇನು ಎನಿಸುವ

ಜ್ಞಾನಸುಧೆಯನಿತ್ತು ಅವರ ಬಿಡದೆ ಸಲಹುವ |

ಮಾನವೀವಾಸರಾಗಿ ಧ್ಯಾನಮಾಡುವ

ಜಾಣ ಲಕುಮೀಶನ್ನ ಸತತ ತುತಿಸುವ||